ಬೆಂಗಳೂರು, 17 ಸಪ್ಟೆಂಬರ್ 2017: ಮೂಕನನ್ನು ವಾಚಾಲನನ್ನಾಗಿ ಮಾಡಲು, ಕಾಲಿಲ್ಲದವನ್ನೂ ಬೆಟ್ಟವೇರುವಂತೆ ಮಾಡಲು, ವಿಶೇಷಚೇತನರನ್ನೂ ಸಮಾಜಪುರುಷರನ್ನಾಗಿಸಲು ಸಮಾಜ ಸಕ್ರಿಯವಾಗಬೇಕಾದ ಅವಶ್ಯಕತೆ ಇದೆ ಎಂದು ಕರ್ನಾಟಕದ ರಾಜ್ಯಪಾಲರಾದ ಶ್ರೀವಜೂಭಾಯಿ ವಾಲಾ ಹೇಳಿದರು.
ಬೆಂಗಳೂರಿನ ಗೋಢ್ವಾಡ್ ಭವನದಲ್ಲಿ ನೆಡೆದ ವಿಶೇಷಚೇತನರ ಕಲ್ಯಾಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ “ಸಕ್ಷಮ”ದ ರಾಷ್ಟ್ರೀಯ ಕಾರ್ಯಕಾರಿಣಿ ಪರಿಷತ್ ಸಭೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲರು, ಪ್ರಚಾರ ಸಿಗದಿದ್ದರೂ ವಿಚಾರ ಪ್ರಚುರಪಡಿಸುವುದು ಸ್ವಯಂಸೇವಕರ ಭಾರತೀಯ ಬದ್ಧತೆ. ಸುರದಾಸ್ ರಂತಹ ವಿಶೇಷಚೇತನರನ್ನೂ ವಿಶಿಷ್ಟ ಚೇತನವಾಗಿ ಗುರುತಿಸಿಕೊಂಡಿರುವ ದೇಶವಿದು. ಇಲ್ಲಿ ರಾಷ್ಟ್ರವೇ ನಮ್ಮ ಪರಿವಾರವೆಂಬ ಭಾವವಿದೆ. ಹಾಗಾಗಿ ವಿಶೇಷಚೇತನರ ಬೌದ್ಧಿಕ ಚಾತುರ್ಯಕ್ಕೆ ನಾವಿಂದು ಮಾನ್ಯತೆ ನೀಡುವ ಕಾರ್ಯ ಖಂಡಿತಾ ಮಾಡಲೇಬೇಕಾದ ಅವಶ್ಯಕತೆಯಿದೆ. ನೇತ್ರದಾನ ಹಾಗೂ ಇಡೀ ದೇಹದಾನವನ್ನು ಮಾಡುವ ಮುಖೇನವಾಗಿ ಕೂಡಾ ವಿಶೇಷಚೇತನರಿಗೆ ನಾವು ಸಹಾಯ ಮಾಡಬಹುದಾಗಿದೆ. ತನ್ಮೂಲಕ ಇತರರಿಗೆ ಮಾದರಿಯಾಗಿ ಸಮಾಜಕ್ಕೆ ಪ್ರೇರಣೆಯನ್ನು ನೀಡುವಲ್ಲಿ ತಮ್ಮ ದೇಣಿಗೆಯನ್ನು ನೀಡಬಹುದಾಗಿದೆ. ತ್ಯಾಗದಿಂದಲೇ ಆನಂದ. ಈ ಆನಂದ ಪಡೆಯುವುದರಿಂದ ಮಾತ್ರ ಜೀವನದ ಸಾರ್ಥಕತೆ ಲಭ್ಯವಾಗುತ್ತದೆ. ಆದ್ದರಿಂದ ನಾವೆಲ್ಲರೂ ಸೇರಿ, ಭಗವಂತನ ಕಾರ್ಯವಾದ ವಿಶೇಷಚೇತನರ ಸರ್ವಾಂಗೀಣ ಅಭಿವೃದ್ಧಿಗಾಗಿ, ಭಾರತದ ಸರ್ವತೋಮುಖ ಸಮೃದ್ಧಿಗಾಗಿ ಕಾರ್ಯತತ್ಪರರಾಗೋಣ ಎಂದರು.
ಇನ್ನೋರ್ವ ಮುಖ್ಯ ಅತಿಥಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ-ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಮಾತನಾಡಿ, ಎಲ್ಲರೂ ಸಕ್ಷಮರೆನ್ನುವುದನ್ನು ಸಾದರಪಡಿಸಲಿಕ್ಕೆಬೇಕಾಗಿ ಸಕ್ಷಮ. ಸ್ವಾಭಿಮಾನ ಮತ್ತು ಆತ್ಮವಿಶ್ವಾಸದೊಂದಿಗೆ ರಾಷ್ಟ್ರನಿರ್ಮಾಣದಲ್ಲಿ ವಿಶೇಷಚೇತನರ ಯೋಗದಾನವನ್ನು ತೊಡಗಿಸಿಕೊಳ್ಳುವ ಸಲುವಾಗಿ ಸಕ್ಷಮ. ಭಗವಂತನೋರ್ವನೇ ಪರಿಪೂರ್ಣನಾಗಿದ್ದು ಉಳಿದವರೆಲ್ಲರೂ ಸ್ವಲ್ಪವಾದರೂ ಅಕ್ಷಮತೆಯನ್ನೇ ಉಳ್ಳವರು. ವಾಮನ ಹಾಗೂ ಸೂರ್ಯನ ಸಾರಥಿ ಅರುಣ ಕೂಡಾ ಇಂದಿನ ಅರ್ಥದಲ್ಲಿ ವಿಶೇಷಚೇತನರೇ ಆದರೂ ಅವರ ವಿಶೇಷ ಸಾಮರ್ಥ್ಯವನ್ನು ಜಗತ್ತಿಗೇ ಸಾದರಪಡಿಸಿದ್ದಾರೆ. ಸ್ಟೀಫನ್ ಹಾಕಿಂಗ್ ರಂತವರನ್ನು ನಾವಿಂದೂ ಕಾಣುತ್ತಿದ್ದೇವೆ. ಹಾಗಾಗಿ ನ್ಯೂನತೆ ಎನ್ನುವುದು ಅಕ್ಷಮತೆಯಲ್ಲ. ಆದರೆ ಮಾನಸಿಕ ವಿಕಸನವನ್ನು ಯಾರು ಹೊಂದಿರುವುದಿಲ್ಲವೋ ಅವರು ಮಾತ್ರ ವಿಕಲಾಂಗರು. ಸಮಾಜವೇ ಮೂಕನನ್ನೂ ಮಾತನಾಡಿಸುವ ಕಾರ್ಯನಿರ್ವಹಿಸಬೇಕಿದೆ. ಅದಕ್ಕಾಗಿ ಸಮಾಜ, ಭಾರತ ಹಾಗೂ ವಿಶ್ವವೇ ನಮ್ಮ ಮನೆಯೆಂದು ಭಾವಿಸುವವರು ಸಮಾಜಪುರುಷರಾಗಬೇಕಿದೆ. ವಿಶೇಷಚೇತನರೂ ಕೂಡಾ ತಮ್ಮ ಕ್ಷಮತೆಯನ್ನು ಸಮಾಜದ ಉತ್ಥಾನದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಭಾರತ ಸರ್ಕಾರದ ವಿಶೇಷಚೇತನ್ರ ಮುಖ್ಯ ಆಯುಕ್ತರಾದ ಡಾ. ಕಮಲೇಶ್ ಕುಮಾರ್ ಪಾಂಡೆಯವರು ಮಾತನಾಡಿ, ಶಿಕ್ಷಣ, ಸ್ವಾವಲಂಬನೆ, ಎಲ್ಲವೂ ಸಮಾಜಕ್ಕೆ ಮುಖ್ಯವಾದದ್ದು. ಭಾರತ ಸರ್ಕಾರ ಈ ಎಲ್ಲ ಆಲೋಚನೆಗಳನ್ನು ಒಳಗೊಂಡು ಕ್ಷಮತೆಯಿಂದ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ವಿಶೇಷಚೇತನರಿಗೂ ಅನನ್ಯ ಮಾನ್ಯತೆಯನ್ನು ನೀಡಲಾಗುತ್ತಿದೆ. ಸಮಾಜದ ಸಂಪೂರ್ಣ ವಿಕಾಸಕ್ಕಾಗಿ ಸರ್ವರ ಸಮತೆಯೊಡನೆ ಅಭಿವೃದ್ಧಿ ಸಂಪನ್ನಗೊಳ್ಳಬೇಕಾಗಿರುವುದನ್ನು ಮನಗಂಡು ವಿಶೇಷಚೇತನರನ್ನು ಒಳಗೊಂಡಂತೆಯೇ ಸರ್ಕಾರದ ಕಾನೂನುಗಳು ಬರುತ್ತಿದೆ. ಈ ಕಾರ್ಯ ಕೇವಲ ಸರ್ಕಾರದಿಂದ ಮಾತ್ರ ಆಗುವುದಲ್ಲ. ಅದಕ್ಕಾಗಿ ಸಾಮಾನ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಿದೆ. ವಿಶೇಷಚೇತನರಿಗೆ ಸಹಕಾರ ಬೇಕಾಗಿದೆಯೇ ಹೊರತು ದಯೆಯಲ್ಲ. ಅದಕ್ಕಾಗಿ ಅವರಿಗೆ ಅಗತ್ಯ ಸಂಜೀವಿನಿಯನ್ನು ನೀಡಿ ಪುನರುಜ್ಜೀವನ ನೀಡಬೇಕಾದ ಅವಶ್ಯಕತೆ ಇದೆ ಎಂದರು.
ಸಕ್ಷಮದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ದಯಾಳ್ ಸಿಂಗ್ ಪನ್ವರ್ ರವರು ಮಾತನಾಡಿ, ಸರ್ವರ ಸಹಕಾರದೊಂದಿಗೇ ಭಾರತವು ತನ್ನ ಪೂರ್ವವೈಭವಕ್ಕೆ ಮರಳಲಿದೆ. ಮನಸ್ಸಿದ್ದರೆ ಮಾರ್ಗವೆನ್ನುವುದನ್ನು ಬಿಟ್ಟು, ಒಂದೊಮ್ಮೆ ಮಾರ್ಗವಿಲ್ಲದಿದ್ದರೂ ಮಾರ್ಗ ಮಾಡಿಕೊಳ್ಳುವ ಕ್ಷಮತೆ ಸಕ್ಷಮದ ಎಲ್ಲಾ ವಿಶೇಷಚೇತನರಲ್ಲಿದೆ. ಹಾಗಾಗಿ ವಿಶೇಷಚೇತರನ್ನೊಳಗೊಂಡ ಸಂಪೂರ್ಣ ಸಮಾಜಕ್ಕಾಗಿ ನಾವೆಲ್ಲ ಒಂದಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಮಿಲಿಂದ್ ಕಸ್ಬೇಕರ್, ಸಿ.ಎಸ್.ವಿಜಯ್ ಕುಮಾರ್, ಡಾ.ಸುಧೀರ್ ಪೈ ಕೆ.ಎಲ್, ವಸಂತ್ ಮಾಧವ್, ನಾಡೋಜ ಎಸ್.ಆರ್.ರಾಮಸ್ವಾಮಿ, ಡಾ.ಎಂ.ಕೆ. ಶ್ರೀಧರ್, ಡಾ.ಮಾಲತಿ.ಕೆ.ಹೊಳ್ಳ, ಎಂ.ನೀಲಯ್ಯ, ಡಾ.ರಾಜ್ ದೀಪ್ ಮನ್ವಾನಿ ಇನ್ನಿತರ ಗಣ್ಯರು ಹಾಜರಿದ್ದರು.