“ದೀಪಾವಳಿ ಸಂದೇಶ”
ಆತ್ಮೀಯರೇ…
ಐದು ಸಹಸ್ರಮಾನಗಳಿಗೂ ಅಧಿಕ ಪ್ರಾಚೀನತೆಯುಳ್ಳ ಭಾರತೀಯ ಜೀವನ ಪ್ರವಾಹದಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಭಾರತೀಯರ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ, ಹಾಗು ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿರುವ ಹಬ್ಬಗಳು ಜೀವನವನ್ನು ಸಂಭ್ರಮೀಕರಿಸಿ ಜೀವನ ಸ್ಪೂರ್ತಿಯನ್ನು ತುಂಬುತ್ತವೆ. ಪ್ರತಿ ಹಬ್ಬವು ವಿಶೇಷ ನಂಬಿಕೆ ಮತ್ತು ವಿಶೇಷ ಆಚರಣೆಗಳಿಂದ ವೈಶಿಷ್ಟ್ಯಪೂರ್ಣವೆನಿಸಿದೆ. ಭಾರತೀಯ ಆಧ್ಯಾತ್ಮಿಕ ಜೀವನ ದೃಷ್ಟಿಕೋನದ ಪ್ರತೀಕವಾದ ಹಬ್ಬಗಳು ಜೀವನಾದರ್ಶಗಳ ಜೀವ ಸೆಲೆಗಳು, ಭೌತಿಕ ಶ್ರೀಮಂತಿಕೆ ಜೊತೆಗೆ ಸತ್ಯ, ಅಹಿಂಸೆ, ದಯೆ, ದಾನ, ಕ್ಷಮೆ, ಪರೋಪಕಾರ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಏಕತೆ, ಮುಂತಾದ ನೈತಿಕ ಆದರ್ಶಗಳ ಮೂಲಕ ಭಾರತೀಯ ಜೀವನ ಶ್ರೀಮಂತಿಕೆಯನ್ನು ಸಾರುತ್ತವೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ವಿಶೇಷ ಮಹತ್ವವೆನಿಸಿರುವ ಹಬ್ಬಗಳ ಮಾಲಿಕೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ವಿಶೇಷ ಸ್ಥಾನವಿದೆ. ಕತ್ತಲಿನ ಎದುರು ಬೆಳಕು, ಅಸತ್ಯದ ಎದುರು ಸತ್ಯ, ಅಧರ್ಮದ ಎದುರು ಧರ್ಮ, ದುಷ್ಟ ಶಕ್ತಿಯ ಎದುರು ಶಿಷ್ಟಶಕ್ತಿ, ಸಾಧಿಸಿದ ಜಯದ ಸಂಕೇತವಾಗಿರುವ ದೀಪಾವಳಿ ಪೌರಾಣಿಕವಾಗಿ ಹಾಗು ಐತಿಹಾಸಿಕವಾಗಿಯೂ ಮಹತ್ವಪೂರ್ಣವೆನಿಸಿದೆ. ಲಂಕಾ ವಿಜಯದ ನಂತರ ಪ್ರಭು ಶ್ರೀರಾಮ ದೀಪಾವಳಿಯಂದೇ ಅಯೋಧ್ಯೆಗೆ ಮರಳಿದನೆಂದು ಪೌರಾಣಿಕ ನಂಬಿಕೆ ಇದೆ. ಸಾವಿರಾರು ವರ್ಷಗಳ ಇತಿಹಾಸವಿರುವ ದೀಪಾವಳಿ ಹಬ್ಬದಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವುದು ರೂಡಿಯಷ್ಟೆ. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕ ಶಕ್ತಿಯುಳ್ಳ ಪಟಾಕಿ ಮತ್ತು ಸಿಡಿಮದ್ದುಗಳ ಅಧಿಕ ಬಳಕೆಯು ದೃಷ್ಟಿನಾಶದಂತಹ ಶಾರೀರಿಕ ವಿಪತ್ತುಗಳಿಗೆ ಮತ್ತು ಪರಿಸರ ಮಾಲಿನ್ಯಕ್ಕೆ ದಾರಿ ಮಾಡುತ್ತಿರುವುದು ವಿಷಾದದ ಸಂಗತಿಯಾಗಿದೆ. ಬೆಳಕಿನ ಹಬ್ಬದಲ್ಲಿಯೇ ಮುಗ್ದ ಮಕ್ಕಳ ಬಾಳಿನ ಬೆಳಕು ನಂದಿ ಹೋಗುತ್ತಿದೆ. ಅಧಿಕ ಶಬ್ಧ, ಮತ್ತು ಸಾಮರ್ಥ್ಯದ ಸ್ಪೋಟಕಗಳ ಬಳಕೆಯಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ನಗರವಾಸಿಗಳ ನೆಮ್ಮದಿಗೆ ಭಂಗ ತರುತ್ತಿದೆ. ಈ ಹಿನ್ನಲೆಯಲ್ಲಿ ವಿಶಿಷ್ಟಚೇತನರ ಸರ್ವಾಂಗೀಣ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಸಂಘಟನೆಯಾದ ಸಮದೃಷ್ಟಿ ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ (ಸಕ್ಷಮ)ವು ಸಾರ್ವಜನಿಕರಲ್ಲಿ ಸುರಕ್ಷಿತ ಮತ್ತು ಪರಿಸರಸ್ನೇಹಿ ದೀಪಾವಳಿ ಆಚರಣೆಗೆ ಮನವಿ ಮಾಡುತ್ತದೆ. ದೀಪಾವಳಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಅಧಿಕ ಸಾಮರ್ಥ್ಯದ ಪಟಾಕಿಗಳನ್ನು ವರ್ಜಿಸಿ, ಸುರಕ್ಷಿತ ದೀಪಾವಳಿ ಆಚರಣೆಗೆ ಪ್ರತಿಯೊಬ್ಬರಿಗೂ ಕರೆ ನೀಡುತ್ತದೆ. ಬಾಳಿನ ಬೆಳಕಿನ ನಿರೀಕ್ಷೆಯಲ್ಲಿರುವ ಸುಮಾರು ೨೫ ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಕಾರ್ನೀಯ ಅಗತ್ಯವಿದೆ. ದುರದೃಷ್ಟವಶಾತ್ ನೇತ್ರದಾನ ಕುರಿತು ಸಮರ್ಪಕ ಮಾಹಿತಿಯ ಕೊರತೆಯಿಂದಾಗಿ ಅಗತ್ಯ ಕಾರ್ನೀಯ ಲಭ್ಯವಾಗದೆ ಅವರೆಲ್ಲರ ಬಾಳಲ್ಲಿ ಕತ್ತಲೆ ಆವರಿಸಿದೆ. ದೀಪಗಳ ಹಬ್ಬ ದೀಪಾವಳಿಯ ಸುಸಂದರ್ಭದಲ್ಲಿ ಪ್ರಜ್ಞಾವಂತರಾದ ನೀವೆಲ್ಲರು ನೇತ್ರದಾನದ ಸಂಕಲ್ಪ ಮಾಡಿ ಸಾರ್ಥಕ ದೀಪಾವಳಿಯ ಆಚರಣೆಗೆ ಮನಸ್ಸು ಮಾಡುತ್ತೀರೆಂದು ’ಸಕ್ಷಮ’ವು ಆಶಿಸುತ್ತದೆ.
ಬದುಕಿರುವವರೆಗೂ ರಕ್ತದಾನ – ಬದುಕಿನ ನಂತರ ನೇತ್ರದಾನ
“DEEPAWALI MESSAGE”